ರೂಪರ್
ಸಿಂಧೂ ಬಯಲಿನ ನಾಗರಿಕತೆಯ ಒಂದು ಸ್ಥಳ. ಇದು ಪೂರ್ವ ಪಂಜಾಬಿನ ಅಂಬಾಲ ಜಿಲ್ಲೆಯ ಸಟ್ಲೆಜ್ ನದಿಯ ಎಡದಂಡೆಯ ಕೋಟ್ಲನಿಹಾಂಗದ ಬಳಿ ವಿಶಾಲವಾದ ದಿಬ್ಬ ಪ್ರದೇಶದಲ್ಲಿದೆ. ಇದು ಉತ್ತರ ಭಾಗದ ಶಿವಾಲಿಕ್ ಬೆಟ್ಟಗಳ ಬುಡದ ಹರಪ್ಪ ಜನರ ನಿವೇಶನದಲ್ಲಿದೆ. ಈ ನಿವೇಶನದಲ್ಲಿ 1953-56ರಲ್ಲಿ ವೈ.ಡಿ. ಶರ್ಮಾ ಅವರು ಉತ್ಖನನ ನಡೆಸಿದರು. ಈ ನಿವೇಶನದಲ್ಲಿ ನಾಲ್ಕು ಸಾಂಸ್ಕøತಿಕ ಘಟ್ಟಗಳನ್ನು ಗುರುತಿಸಲಾಗಿದೆ. ಇದರಲ್ಲಿ ಬಹಳ ಪ್ರಾಚೀನ ಸಂಸ್ಕøತಿಯೆಂದರೆ ಹರಪ್ಪ ಸಂಸ್ಕøತಿಯ ಕಾಲ. ಬೂದುಬಣ್ಣದ ಮಡಕೆ ಸಂಸ್ಕøತಿಯಕಾಲ, ಕುಶಾನ ಮತ್ತು ಗುಪ್ತರಕಾಲ ಹಾಗೂ ಮಧ್ಯಯುಗ ಉಳಿದ ಕಾಲ ಘಟ್ಟಗಳು. ಅತ್ಯಂತ ಕೆಳಸ್ತರದಲ್ಲಿ ನಡೆಸಿದ ಉತ್ಖನನದಲ್ಲಿ ನಗರ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲವಾದರೂ ಹರಪ್ಪ ಸಂಸ್ಕøತಿಯ ಇತರ ಲಕ್ಷಣಗಳೆನಿಸಿರುವ ಒಳ ಚರಂಡಿ ವ್ಯವಸ್ಥೆ ಹಾಗೂ ವೇದಿಕೆಗಳು ಇಲ್ಲಿಯೂ ಕಂಡುಬಂದಿವೆ.

ಈ ನಿವೇಶನದಲ್ಲಿ ಹಲವಾರು ವಸ್ತುಗಳು ದೊರೆತಿವೆ. ಇವುಗಳಲ್ಲಿ ಮೇದ ಶಿಲೆಯ ಚಕ್ರಾಕಾರದ ಮಣಿಗಳು, ತಾಮ್ರದ ಕೊಡಲಿ, ಚರ್ಟ್‍ಕಲ್ಲಿನ ಉದ್ದವಾದ ಅಲಗು ಘನಾಕೃತಿಯ ತೂಕದ ಬಟ್ಟುಗಳು, ಚಿತ್ರಲಿಪಿಯುಳ್ಳ ಮೇದ ಶಿಲೆಯ ಚದರಾಕಾರದ ಮುದ್ರೆ ಮುಖ್ಯವಾದುವು. ಇವೆಲ್ಲವೂ ಸಿಂಧೂನಾಗರಿಕತೆಯ ವೈಶಿಷ್ಟ್ಯಗಳೇ ಆಗಿವೆ. ರೂಪರ್‍ನಲ್ಲಿ ಹರಪ್ಪದ ಕೆಲವು ಮಣ್ಣಿನ ಪಾತ್ರೆಯಂಥ ಮಾದರಿಗಳು ದೊರೆತಿವೆ. ಕೊಕ್ಕುಳ್ಳ ಪಾತ್ರೆ (ಬೀಕರ್) ಇಂಥ ಒಂದು ಉದಾಹರಣೆ. ಸಿಂಧೂ ಶೈಲಿಯ “S” ಆಕಾರವುಳ್ಳ ಪಾತ್ರೆ ಇಲ್ಲಿ ವಿರಳವಾಗಿರುವುದು ಒಂದು ವಿಶೇಷವಾಗಿದೆ. ಈ ನಿವೇಶನದಲ್ಲಿ ದೊರೆತಿರುವ ಏಕೈಕ ಮುದ್ರೆಯಲ್ಲಿ ಪ್ರಾಣಿಯ ಆಕೃತಿಯಾಗಲೀ ರಂಧ್ರಗಳಿರುವ ಗುಬುಟಾಗಲೀ ಇಲ್ಲ. ಇವು ಲೋಥಲ್‍ನ ಹರಪ್ಪ ಸಂಸ್ಕøತಿಯ ಪ್ರೌಢ ಹಂತದ ಮುದ್ರೆಗಳಿಗಿಂತ ಅವನತಿಯ ಕಾಲದ ಮುದ್ರೆಗಳೊಡನೆ ಸಾಮೀಪ್ಯ ಪಡೆದಿವೆ. ಸಿಂಧೂ ನಾಗರಿಕತೆಯ ಅವನತಿಯ ಕಾಲದ ಕುರುಹಾಗಿರುವ ಚೂಪಾದ ಪೀಠದ ಬಟ್ಟಲು (ಪಾಯಿಂಟೆಡ್ ಗಾಬ್ಲೆಟ್) ಇಲ್ಲಿ ದೊರೆತಿದೆ. ಹರಪ್ಪ ಜನರು ರೂಪರ್‍ನಲ್ಲಿ ಬಹಳ ತಡವಾಗಿ ಬಂದು ನೆಲೆಸಿರುವ ಸ್ಪಷ್ಟಸೂಚನೆ ಇದಾಗಿದೆ ಎಂದು ಹೇಳಲಾಗಿದೆ. ಹರಪ್ಪದಲ್ಲಿ ಕಂಡುಬರುವ ವಿಶಿಷ್ಟ ಮಣ್ಪಾತ್ರೆ ಮಾದರಿಗಳೆಂದರೆ ಪೀಠದ ಮೇಲಿನ ತಟ್ಟೆ (ಡಿಶ್-ಆನ್-ಸ್ಟ್ಯಾಂಡ್), ರಂಧ್ರಗಳುಳ್ಳ ಕೊಳವೆಯಾಕಾರದ ಜಾಡಿ (ಸಿಲಿಂಡ್ರಿಕಲ್ ಪರ್‍ಫೊರೇಟೆಡ್ ಜಾರ್), ಸಣ್ಣಕತ್ತಿನ ಜಾಡಿ ಮತ್ತು ಕಿರಿದಾದ ತಳವಿರುವ ದೊಡ್ಡ ತೊಟ್ಟಿಗಳು (ತ್ರೋ) ಮತ್ತು ಚಿತ್ರಿತ ಬೂದುಬಣ್ಣದ ಮಡಕೆಗಳು (ಪೇಯಿಂಟೆಡ್ ಗ್ರೇ ವೇರ್). ಇನ್ನಿತರ ನೆಲೆಯಲ್ಲಿ ಸಿಕ್ಕಿರುವ ಮುದ್ರೆಗಳು ಹಾಗೂ ರೂಪರ್‍ನಲ್ಲಿ ಸಿಕ್ಕಿರುವ ಮುದ್ರೆಗಳನ್ನು ಹೋಲಿಸಿ ಈ ನಿವೇಶನದ ಕಾಲವನ್ನು ಹರಪ್ಪ ಸಂಸ್ಕøತಿಯ ಪ್ರೌಢಾವಸ್ಥೆಯ ಕಾಲವೆಂದು (ಕ್ರಿ.ಪೂ.2500-1900) ಹೇಳಬಹುದು. ಇಲ್ಲಿ ಆಯತಾಕಾರದ ಇಟ್ಟಿಗೆಯ ವೇದಿಕೆ ಇರುವುದು ಒಂದು ವಿಶೇಷ. ರೂಪರ್ ಮತ್ತು ಹರಪ್ಪ ನೆಲೆಯನ್ನು ಬಿಟ್ಟರೆ ಒಲೆಗಳಲ್ಲಿ ತಲೆಕೆಳಕಾಗಿ ಮೊಗಚಿಟ್ಟ ಸುಟ್ಟ ಕಪ್ಪು ಮತ್ತು ಕೆಂಪು ಮಡಕೆಗಳು (ಬ್ಲ್ಯಾಕ್ ಅಂಡ್ ರೆಡ್ ವೇರ್) ಮತ್ತೆಲ್ಲಿಯೂ ಸಿಗುವುದಿಲ್ಲ.

ಈ ನೆಲೆಯಲ್ಲಿ ಯಾವುದೇ ಧಾರ್ಮಿಕ ಕಟ್ಟಡಗಳು ದೊರೆತಿಲ್ಲ. ಆದುದರಿಂದ ಈ ಜನರ ಧಾರ್ಮಿಕ ನಂಬಿಕೆ ಹಾಗೂ ಆಚಾರಗಳ ಬಗ್ಗೆ ತಿಳಿದುಕೊಳ್ಳಲು ಆರಾಧನಾ ಪದ್ಧತಿಗೆ ಸಂಬಂಧಿಸಿದ ಮುದ್ರೆಗಳು, ಕಲ್ಲಿನ ವಿಗ್ರಹಗಳು, ಸುಟ್ಟ ಮಣ್ಣಿನ ಪ್ರತಿಮೆಗಳಂಥ ವಸ್ತುಗಳು ಸಹಕಾರಿಯಾಗಿವೆ. ಈ ನೆಲೆಯಲ್ಲಿ ಸಿಂಧೂ ಕಣಿವೆಯಲ್ಲಿ ದೊರೆತಂಥ ವಸ್ತುಗಳು ದೊರೆತಿಲ್ಲವಾದರೂ ಇಲ್ಲಿ ಸಿಕ್ಕಿರುವ ಮುದ್ರೆಯಲ್ಲಿ ಆರಾಧನಾ ದೃಶ್ಯಗಳಾಗಲೀ ದೇವ ದೇವತೆಗಳನ್ನು ಸೂಚಿಸುವ ಯಾವುದೇ ಚಿತ್ರಣವಾಗಲೀ ಕಂಡುಬರುವುದಿಲ್ಲ. ಮಾತೃದೇವತೆ ಮತ್ತು ಶಿವದೇವತೆಗಳ ಪರಿಚಯವೇ ಇವರಿಗೆ ಇರಲಿಲ್ಲ. ರೂಪರ್‍ನಲ್ಲಿ ಮಾತೃದೇವತೆಯ ಕುರುಹು ಕಾಣದಿರುವುದರಿಂದ ಸಿಂಧ್ ಪ್ರಾಂತದ ಹೊರಗೆ ಈ ದೇವತೆಯ ಆರಾಧನೆ ಜನಪ್ರಿಯವಾಗಿರಲಿಲ್ಲ ಅನ್ನಬಹುದು. ಹಾಗೆಯೇ ಲಿಂಗವೆಂದು ಗುರುತಿಸಬಹುದಾದ ಶಂಖುವಿನಾಕಾರದ ವಸ್ತುಗಳಾಗಲೀ ಪ್ರಾಣಿಗಳಿಂದ ಸುತ್ತುವರಿಯಲ್ಪಟ್ಟ ಕೊಂಬುಗಳುಳ್ಳ ದೇವತೆ (ಪಶುಪತಿ) ಇರುವ ಮುದ್ರೆಗಳಾಗಲಿ ಇಲ್ಲಿ ದೊರೆತಿಲ್ಲವಾದುದ ರಿಂದ ಶಿವನ ಹಾಗೂ ಲಿಂಗದ ಆರಾಧನೆ ರೂಢಿಯಲ್ಲಿರಲಿಲ್ಲವೆಂದು ಭಾವಿಸಬಹುದು.

ಇದುವರೆಗೂ ಉತ್ಖನನ ಮಾಡಿದ ಇಪ್ಪತ್ತ್ನಾಲ್ಕಕ್ಕೂ ಹೆಚ್ಚಿನ ಹರಪ್ಪ ನೆಲೆಗಳ ಪೈಕಿ ಕೇವಲ ಐದರಲ್ಲಿ ಮಾತ್ರ ಶವ ಹೂಳುತ್ತಿದ್ದುದು ಕಂಡುಬರುತ್ತದೆ. ಇಲ್ಲಿಯ ಶ್ಮಶಾನ, ವಸತಿ ಪ್ರದೇಶದ ಪಶ್ಚಿಮಕ್ಕಿದೆ. ಸಮಾಧಿ ಗುಂಡಿಗಳು ಸಾಮಾನ್ಯವಾಗಿ 2.4x1ಮೀ ಉದ್ದ ಹಾಗೂ 0.67ಮೀ ಆಳವಾಗಿವೆ. ಒಟ್ಟು 13 ಸಮಾಧಿಗಳಲ್ಲಿ 13 ವ್ಯಕ್ತಿಗಳ ಅಸ್ಥಿಪಂಜರಗಳು ದೊರೆತಿವೆ. ಸಾಮಾನ್ಯವಾಗಿ ಸಮಾಧಿಯಲ್ಲಿ ಶವದ ತಲೆಯನ್ನು ವಾಯವ್ಯ ದಿಕ್ಕಿಗಿಡಲಾಗಿದೆ. ಒಂದು ಕಡೆಯಲ್ಲಿ ಮಾತ್ರ ಶವವನ್ನು ಉತ್ತರ ದಕ್ಷಿಣವಾಗಿ ಇಡಲಾಗಿದೆ. ಜಾಡಿಗಳು, ಪೀಠದ ಮೇಲಿನ ತಟ್ಟೆಗಳು ಮಂತಾದುವುಗಳನ್ನು ಸಾಮಾನ್ಯವಾಗಿ ಶವದ ತಲೆಯ ಇಲ್ಲವೆ ಕಾಲುಗಳ ಬಳಿ ಇಡಲಾಗುತ್ತಿತ್ತು, ಕೆಲವು ಕಡೆ ಶವದ ಅಕ್ಕಪಕ್ಕಗಳಲ್ಲಿಟ್ಟಿರುವುದೂ ಉಂಟು. ಒಂದು ಕಡೆ ಮಾತ್ರ ಮಡಕೆಗಳ ಮೇಲೆ ಶವವನ್ನಿಟ್ಟಿರುವುದು ಕಂಡುಬಂದಿದೆ. ಈ ಸಮಾಧಿಗಳಲ್ಲಿ 2ರಿಂದ 26 ಮಡಕೆಗಳಿದ್ದುದು ಕಂಡುಬಂದಿದೆ. ಸಮಾಧಿಗಳಲ್ಲಿ ಪಿಂಗಾಣಿ ಹಾಗೂ ಶಂಖದ ಬಳೆಗಳು, ತಾಮ್ರದ ಉಂಗುರ, ಮಣಿಗಳೂ ದೊರೆತಿವೆ. ಒಂದು ಸಮಾಧಿಯಲ್ಲಿ ಶವದ ಎಡ ಮಣಿಕಟ್ಟಿನಲ್ಲಿ ಪಿಂಗಾಣಿ ಬಳೆ ಇದ್ದುದು ಕಂಡುಬಂದಿದೆ. ರೂಪರ್‍ನಲ್ಲಿ ಶವವನ್ನು ಸುಟ್ಟ ಅನಂತರ ಅವಶೇಷವನ್ನು ಹೂಳುತ್ತಿದ್ದು ದಾಗಲೀ ಅಥವಾ ಶವದ ಅವಶೇಷಗಳ ಕೆಲವು ಭಾಗಗಳನ್ನು ಜಾಡಿಗಳಲ್ಲಿಟ್ಟು ಹೂಳುತ್ತಿದ್ದುದಾಗಲೀ ಕಂಡುಬಂದಿಲ್ಲ. ಮಾನವನ ಸಮಾಧಿಯ ಕೆಳಗಡೆ ನಾಯಿಯ ಅಸ್ಥಿಪಂಜರ ದೊರೆತಿರುವುದು ಇಲ್ಲಿಯ ಶವಸಂಸ್ಕಾರದ ವಿಧಿಯ ಕುರಿತಾಗಿ ಸ್ವಲ್ಪವಾದರೂ ಬೆಳಕು ಚೆಲ್ಲಲು ಸಹಕಾರಿಯಾಗಿದೆ.

ಲೋಥಲ್‍ನಲ್ಲಿ (ಕ್ರಿ.ಪೂ.2000) ಯಾವ ಜನರಿದ್ದರೋ ಬಹುಶಃ ಅವರೇ ರೂಪರ್‍ನಲ್ಲಿಯೂ ಇದ್ದಿರಬಹುದೆಂದು ಮಾನವಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಜಾನಾಂಗಿಕ ದೃಷ್ಟಿಯಿಂದ 4 ಸಾವಿರ ವರ್ಷಗಳ ಹಿಂದೆ ಹರಪ್ಪ ಮತ್ತು ರೂಪರ್‍ಗಳಲ್ಲಿದ್ದ ಜನರಿಗೂ ಇಂದಿನ ಪಂಜಾಬಿನ ಜನತೆಗೂ ಹೆಚ್ಚು ವ್ಯತ್ಯಾಸವಿಲ್ಲವೆಂದು ಹೇಳಲಾಗಿದೆ. ಗುಜರಾತ್ ಮತ್ತು ಪಂಜಾಬಿನ ಜನರು ಇಂಡೋ ಆರ್ಯನ್ ಕುಟುಂಬದ ಭಾಷೆಗೆ ಸೇರಿದವರು. ಸಿಂಧೂ ಕಣಿವೆ ಹಾಗೂ ಗುಜರಾತಿನ (ಕ್ರಿ.ಪೂ.2000) ನೆಲೆಗಳಲ್ಲಿದ್ದ ಹರಪ್ಪ ಜನರು ಎರಡು ಅಥವಾ ಇನ್ನೂ ಹೆಚ್ಚು ಗುಂಪುಗಳಿಗೆ ಸೇರಿದ್ದವರು. ಇಂಡೋ ಆರ್ಯನ್ ಭಾಷೆ ಬಳಸುತ್ತಿರುವ ಇಂದಿನ ಜನರೊಂದಿಗೆ ಅವರ ಸಾಮ್ಯ ಪ್ರಾಯಃ ಹೆಚ್ಚಾಗಿದೆ ಎಂದು ಹೇಳಬಹುದು. ಅನುಕ್ರಮವಾಗಿ ಸಾಂಸ್ಕøತಿಕ ಅನುಪೂರ್ವಿಯು (ಕಲ್ಚರಲ್ ಸೀಕ್ವೆನ್ಸ್) ತೋರಿಸುವಂತೆ ಮಹಾಭಾರತದ ಆರ್ಯರೆಂದು ಗುರುತಿಸಲಾಗಿರುವ, ಚಿತ್ರಿತ ಬೂದು ಬಣ್ಣದ ಮಡಕೆಗಳನ್ನು ಬಳಸುತ್ತಿದ್ದ ಜನರು ಸಿಂಧ್ ಪ್ರದೇಶವನ್ನು ತ್ಯಜಿಸಿದ ಎಷ್ಟೋ ಕಾಲದ ಆನಂತರ ರೂಪರ್‍ಗೆ ಬಂದರೆಂದು ಹೇಳಲಾಗಿದೆ. ಸಿಂಧೂ ಮತ್ತು ಸಾಬರಮತಿ ಕಣಿವೆಗಳ ಭೂಮಿಯ ಹೊರ ಪದರದ ರಚನೆಯ ವ್ಯತ್ಯಾಸಗಳಿಗೆ ಕಾರಣವಾಗಿರುವ ಮಹಾಪೂರ ಪ್ರಾಚೀನ ಸಂಸ್ಕøತಿ ನೆಲೆಯ ಮೇಲೂ ಅಪಾರ ಹಾನಿಮಾಡಿತ್ತೆಂದು ಊಹಿಸಬಹುದು. ಇಂತಹ ನೈಸರ್ಗಿಕ ಅನಾಹುತಗಳ ತರುವಾಯ ಪ್ರಾಯಃ ಹರಪ್ಪ ಜನರು ಸಿಂಧೂ ಮತ್ತು ಸಾಬರಮತಿ ಕಣಿವೆಗಳನ್ನು ತ್ಯಜಿಸಿ ಹೆಚ್ಚು ಸುರಕ್ಷಿತವಾದ ಎತ್ತರದ ಪ್ರದೇಶಗಳನ್ನು ಹುಡುಕಿಕೊಂಡು ಹೊರಟರು. ಸಿಂಧೂ ಕಣಿವೆಯ ಕೆಲವರು ಘಗ್ಗರ್ ಕಣಿವೆಗೂ ಮತ್ತೆ ಕೆಲವರು ಸಟ್ಲೆಜ್ ಪಾತ್ರ ಭೂಮಿಗೂ ಹೋದರು. ಇದರಿಂದಾಗಿ ರೂಪರ್‍ನೆಲೆ ಅಸ್ತಿತ್ವಕ್ಕೆ ಬಂದಿತೆಂದು ಹೇಳಬಹುದು. ಈ ನಿವೇಶನ ನೈಸರ್ಗಿಕ ವಿಪತ್ತುಗಳಾದ ಮಹಾಪೂರ, ಭೂಕಂಪ ಅಥವಾ ಭೀಕರ ರೋಗಗಳಿಗೆ ತುತ್ತಾಗಿ ನಾಶವಾಗಿರಬಹುದು, ಇಲ್ಲವೇ ಆಕ್ರಮಣಕಾರರ ಬಲಪ್ರಯೋಗದ ಹಿಂಸಾತ್ಮಕ ಘಟನೆಗಳಿಂದ ನಾಶವಾಗಿರಬಹುದೆಂದು ಹೇಳಲಾಗಿದೆ.

ಮಾನವ ಸಮಾಜದ ಏಳಿಗೆಗೆ ಈ ನೆಲೆಯ ಕೊಡುಗೆ ಅಪಾರವಾದು ದೆಂದೇ ಹೇಳಬಹುದು. ಹರಪ್ಪ ಸಂಸ್ಕøತಿಯ ನಗರ ಯೋಜನೆಗಳು ಇಲ್ಲಿ ಇಲ್ಲದಿದ್ದರೂ ಒಳ ಚರಂಡಿ ವ್ಯವಸ್ಥೆ ಹಾಗೂ ವೇದಿಕೆಗಳು ಕಂಡುಬಂದಿರುವುದರಿಂದ ಇದು ಒಂದು ನಗರ ಯೋಜನೆಗೆ ಅಣಿಯಾಗುತ್ತಿತ್ತೆಂದು ಊಹಿಸಬಹುದು. ಇಲ್ಲಿನ ಜನರು ಕುಂಭ ಕಲೆಯಲ್ಲಿ ತಮ್ಮ ಪೂರ್ವಜರಿಗಿಂತ ಹೆಚ್ಚಿನ ತಂತ್ರಗಾರಿಕೆಯನ್ನು ತೋರಿಸಿದ್ದಾರೆ. ಸಿಂಧೂ ಬಯಲಿನ ನಾಗರಿಕತೆಯಲ್ಲಿ ಈ ನೆಲೆಗೆ ಮಹತ್ತ್ವದ ಸ್ಥಾನವಿದೆ.	
(ಎಸ್.ಬಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ